   ಮೂಲದೊಡನೆ ಪರಿಶೀಲಿಸಿ

ಕಾಂಪ್ಟನ್ ಪರಿಣಾಮ

 ಎಲೆಕ್ಟ್ರಾನುಗಳಿಗೆ ಡಿಕ್ಕಿಹೊಡೆದು ಚದರುವ ಎಕ್ಸ್‍ಕಿರಣಗಳ ಅಲೆಯುದ್ದದಲ್ಲಿ ಉಂಟಾಗುವ ಹೆಚ್ಚುವರಿ (ಕಾಂಪ್ಟನ್ ಎಫೆಕ್ಟ್ಸ್). ತೆಳುವಾದ ತಾಟುಗಳ ಮೂಲಕ ಹಾಯುವ ಎಕ್ಸ್‍ಕಿರಣಗಳ ಚದರಿಕೆಯನ್ನು ಜೆ. ಜೆ. ಥಾಮ್ಸನ್ (1856-1946) ಎಂಬ ವಿಜ್ಞಾನಿ ಆವಿಷ್ಕರಿಸಿ ಚದರಿದ ಕಿರಣಗಳ ಅಲೆಯುದ್ಧ ಮೂಲಕಿರಣಗಳ ಅಲೆಯುದ್ದದಷ್ಟೇ ಇರುತ್ತದೆಂದು ತಿಳಿಸಿದ. ಎಕ್ಸ್‍ಕಿರಣಗಳು ವಿದ್ಯುತ್ಕಾಂತ ಅಲೆಗಳು. ಅವು ತಾಮ್ರದ ತಾಟುಗಳ ಮೂಲಕ ಹಾಯುವಾಗ ಎಲೆಕ್ಟ್ರಾನುಗಳು ಕಂಪಿಸುತ್ತವೆ. ಎಲೆಕ್ಟ್ರಾನುಗಳು ವಿದ್ಯುತ್ಕಾಂತ ಅಲೆಗಳ ವಿದ್ಯುತ್ ಪ್ರೇರಣೆಯ ಪ್ರಭಾವದಿಂದ ಕಂಪಿಸುವುದರಿಂದ ಅವುಗಳ ಆವೃತ್ತಿ ವಿದ್ಯುತ್ಕಾಂತ ಅಲೆಗಳ ಆವೃತ್ತಿಗೆ ಸರಿಸಮನಾಗಿರುತ್ತದೆ. ಹೀಗೆ ಕಂಪಿಸುವ ಎಲೆಕ್ಟ್ರಾನುಗಳಿಂದ ಅದೇ ಆವೃತ್ತಿಯ ವಿದ್ಯುತ್ಕಾಂತ ಅಲೆಗಳ ಆವೃತ್ತಿಗೆ ಅನುಗುಣವಾದ ಅಲೆಗಳನ್ನು  ಹೊರಚಿಮ್ಮುತ್ತವೆ. ಅವು ಇಂಥ ಕಡೆಗೇ ಚಿಮ್ಮಬೇಕೆಂಬ ನಿರ್ಬಂಧವಿಲ್ಲ. ಥಾಮ್ಸನ್ ತನ್ನ ಆವಿಷ್ಕರಣದ ಬಗ್ಗೆ ಕೊಟ್ಟ ವಿವರಣೆ ಇದು.

 1912ರಲ್ಲಿ ಸಿ.ಎ. ಸ್ಯಾಡ್ಲರ್ ಮತ್ತು ಪಿ. ಮೆಶಾಮ್ ಎಂಬ ವಿಜ್ಞಾನಿಗಳು ಥಾಮ್ಸನ್ನನ ಪ್ರಯೋಗಗಳನ್ನು ಮತ್ತೆ ಮಾಡಿದರು. ಈ ಸಾರಿ ಅವರು ಉಪಯೋಗಿಸಿದ ಮೂಲ ಎಕ್ಸ್‍ಕಿರಣಗಳ ಅಲೆಯುದ್ದ ಕಮ್ಮಿಯಾಗಿತ್ತು. ಚದರಿದ ಎಕ್ಸ್‍ಕಿರಣಗಳ ಅಲೆಯುದ್ದಲ್ಲಿ ಹೆಚ್ಚುವರಿ ಕಂಡಿತು. ಚದರಿದ ಗಾಮಕಿರಣಗಳ ಅಲೆಯುದ್ದ ಮೂಲ ಕಿರಣಗಳ ಅಲೆಯುದ್ದಕ್ಕಿಂತ ಖಚಿತವಾಗಿ ಹೆಚ್ಚಾಗಿರವುದೆಂದು ಜಿ.ಎ.ಗ್ರೇ ಎಂಬಾತ ತೋರಿಸಿದ (1920).  ಅಲೆಯುದ್ದದಲ್ಲಿ ಉಂಟಾಗುವ ಹೆಚ್ಚುವರಿ ಚದರಿಕೆಯ ಕೋನವನ್ನು ಅನುಸರಿಸಿ ಏರುತ್ತಲೇ ಹೋಗುವುದೆಂದು ಅವನು ತೋರಿಸಿದ.

 

ಚಿತ್ರ-1

 

 ಚದರಿಕೆಯಿಂದ ಎಕ್ಸ್‍ಕಿರಣಗಳ ಅಲೆಯುದ್ಧದಲ್ಲಿ ಉಂಟಾಗುವ ಹೆಚ್ಚುವರಿಯನ್ನು ಕಾಂಪ್ಟನ್ 1919ರಲ್ಲೇ ಗಮನಿಸಿದ್ದ ಲ್ಲದೆ. ಪ್ರಯೋಗಗಳನ್ನು ಅವಿರತವಾಗಿ ಮುಂದುವರಿಸಿ 1923ರಲ್ಲೇ ತತ್ಸಂಬಂಧ ಸಿದ್ಧಾಂತವನ್ನು ಮಂಡಿಸಿದ. ಎಕ್ಸ್‍ಕಿರಣಗಳು ಪೋಟಾನುಗಳ ಪ್ರವಾಹ, ಅವುಗಳಿಗೆ ಅಲೆಯುದ್ಧ ಮತ್ತು ಆವೃತ್ತಿ ಹೇಗೆ ಸ್ವಾಭಾವಿಕವೋ ಹಾಗೆಯೇ ಶಕ್ತಿ ಮತ್ತು ಸಂವೇಗ (ಮೊಮೆಂಟಂ) ಕೂಡ ಸ್ವಾಭಾವಿಕ. ಅವು ಎಲೆಕ್ಟ್ರಾನುಗಳಿಗೆ ಡಿಕ್ಕಿಹೊಡೆಯುವಾಗ ಕಣಗಳಂತೆ ವರ್ತಿಸುತ್ತವೆ. ಈ ಡಿಕ್ಕಿಗಳಲ್ಲಿ ಒಟ್ಟು ಶಕ್ತಿಯ ವ್ಯತ್ಯಾಸವಾಗುವುದಿಲ್ಲ. ಅದರಂತೆಯೇ ಒಟ್ಟು ಸಂವೇಗ ಕೂಡ ವ್ಯತ್ಯಾಸಗೊಳ್ಳುವುದಿಲ್ಲ. ಡಿಕ್ಕಿ ಹೊಡೆದ ಪೋಟಾನು ಚದರಿದ ತತ್‍ಕ್ಷಣದಲ್ಲೆ ಎಲೆಕ್ಟ್ರಾನ್ ಹಿನ್ನೆಗೆಯುತ್ತದೆ. ಪೋಟಾನಿನ ಚದರಿಕೆ ಮತ್ತು ಎಲೆಕ್ಟ್ರಾನಿನ ಹಿನ್ನೆಗೆತ ಸಂವೇಗ ಸಂರಕ್ಷಣಾ ತತ್ತ್ವಕ್ಕೆ (ಕನ್ಸರ್ವೇಶನ್ ಆಫ್ ಮೊಮೆಂಟಂ) ಅನುಗುಣವಾಗಿರುವುದರಿಂದ ಚದರಿಕೆಯ ಕೋನಕ್ಕೂ ಹಿನ್ನೆಗೆತದ ಕೋನಕ್ಕೂ ನಿರ್ದಿಷ್ಟವಾದ ಸಂಬಂಧವಿದೆ. ಫೋಟಾನು ಡಿಕ್ಕಿಹೊಡೆಯುವುದಕ್ಕೆ ಮುಂಚೆ ಎಲೆಕ್ಟ್ರಾನ್ ಸ್ಥಿರವಾಗಿಯೂ ಅನಿರ್ಬಂಧಿತವಾಗಿಯೂ ಇತ್ತೆಂದು ಭಾವಿಸಿದರೆ ಚದರಿದ ಫೋಟಾನಿನ ಅಲೆಯುದ್ಧದಲ್ಲಿ ಉಂಟಾಗುವ ಹೆಚ್ಚುವರಿ ಮತ್ತು ಎಲೆಕ್ಟ್ರಾನಿನ ಚಲನಶಕ್ತಿಗಳನ್ನು (ಕೈನೆಟಿಕ್ ಎನರ್ಜಿ) ಕಾಂಪ್ಟನ್ನನ ಸಿದ್ಧಾಂತದ ಮೇರೆಗೆ

 

ಎಂದು ತೋರಿಸಬಹುದು. ಇಲ್ಲಿ h ಪ್ಲಾಂಕ್ ಸ್ಥಿರಾಂಕ, m ಎಲೆಕ್ಟ್ರಾನಿನ ರಾಶಿ, ಛಿ ನಿದ್ರ್ರವ್ಯದಲ್ಲಿ ಬೆಳಕಿನ ವೇಗ ಮೂಲ ಎಕ್ಸ್‍ಕಿರಣದ ಅಲೆಯುದ್ದ ಮತ್ತು  ಚದರಿಕೆಯ ಕೋನಕ್ಕೂ ಹಿನ್ನೆಗೆತದ ಕೋನಕ್ಕೂ ಇರುವ ಸಂಬಂಧ ಹೀಗಿರುತ್ತದೆ.

 ಪರಮಾಣುಗಳಲ್ಲಿ ಎಲೆಕ್ಟ್ರಾನುಗಳು ಬಂಧಿತವಾಗಿವೆ. ಅವುಗಳ ಬಂಧನಶಕ್ತಿ ಕಮ್ಮಿ ಪರಮಾಣುಸಂಖ್ಯೆಯ ಪರಮಾಣುಗಳಲ್ಲಿ ಕಮ್ಮಿಯಾಗಿರುತ್ತದೆ. ಆದ್ದರಿಂದ ಕಾಂಪ್ಟನ್ ತನ್ನ ಸಿದ್ದಾಂತವನ್ನು ಶ್ರುತಪಡಿಸಲು ಮಾಡಿದ ಪ್ರಯೋಗಗಳಿಗೆ ಇಂಗಾಲದ ತಾಟುಗಳನ್ನು ಬಳಸಿದ. ಮೂಲ ಎಕ್ಸಕಿರಣಗಳಿಗಾಗಿ ಮಾಲಿಬ್ಡಿನಮ್ ಏಚಿ-ಕಿರಣಗಳನ್ನು ಉಪಯೋಗಿಸಿದ. ಚದರಿದ ಎಕ್ಸ್‍ಕಿರಣಗಳ ಅಲೆಯುದ್ಧದಲ್ಲಿ ಉಂಟಾಗುವ ಹೆಚ್ಚುವರಿ ಮತ್ತು ಆ ಹೆಚ್ಚುವರಿಗೂ ಚದರಿಕೆಯ ಕೋನಕ್ಕೂ ಇರುವ ಸಂಬಂಧ ಸಮೀಕರಣ (1) ರಲ್ಲಿದ್ದಂತೆಯೇ ಇರುವುದನ್ನು ಆ ಪ್ರಯೋಗಗಳು ತೋರಿಸಿದುವು. ಇದಾದ ಕೆಲವು ತಿಂಗಳುಗಳಲ್ಲೇ ಬೊತೆ ಮತ್ತು ವಿಲ್ಸನ್ ಅವರು ಹಿನ್ನೆಗೆಯುವ ಎಲೆಕ್ಟ್ರಾನುಗಳನ್ನು ಮೇಘಮಂದಿರದ ಛಾಯಾಫಲಕಗಳಲ್ಲಿ ಪತ್ತೆ ಹಚ್ಚಿ ಅವುಗಳ ಚಲನಶಕ್ತಿ ಸಮೀಕರಣ (2) ನ್ನೇ ಅನುಸರಿಸಿರುವುದೆಂದು ತೋರಿಸಿದರು.

 ಕಾಂಪ್ಟನ್ನನ ವಾದ ದ್ಯುತಿವಿದ್ಯುತ್ (ಫೋಟೊಎಲೆಕ್ಟ್ರಿಕ್) ಪರಿಣಾಮವನ್ನು ವಿವರಿಸಲು ಐನ್‍ಸ್ಟೈನ್ ಮಂಡಿಸಿದ್ದ ಶಕಲ (ಕ್ವಾಂಟಮ್) ಸಿದ್ಧಾಂತದ ಮುಂದುವರಿಕೆಯೇ ಆಗಿದೆ. ಐನ್‍ಸ್ಟೈನ್ ಫೋಟಾನುಗಳು ಶಕ್ತಿಯ ಪುಂಜಗಳೆಂದು ಭಾವಿಸಿ ದ್ಯುತಿವಿದ್ಯುತ್ ಪರಿಣಾಮವನ್ನು ವಿವರಿಸಿದ್ದ. ಕಾಂಪ್ಟನ್ ಫೋಟಾನುಗಳಿಗೆ ಇನ್ನೂ ಹೆಚ್ಚಿನ ನಿರ್ದಿಷ್ಟ ಗುಣಗಳನ್ನು ಆರೋಪಿಸಿದ. ಆಗಿನ ನಂಬಿಕೆಗಳಿಗೆ ಈ ವಾದ ತೀರ ದೂರವಾಗಿತ್ತು. ಆದ ಕಾರಣ ಬೋರ್, ಕ್ರೇಮರ್ ಮತ್ತು ಸ್ಲೇಟರ್ ಅವರು ಕಾಂಪ್ಟನ್ನನ ವಾದವನ್ನು ಒಪ್ಪದೆ ಎಕ್ಸ್‍ಕಿರಣಗಳು ವಿದ್ಯುತ್ಕಾಂತ ಅಲೆಗಳೆಂದು ಭಾವಿಸಿಯೇ ಕಾಂಪ್ಟನ್ ಪರಿಣಾಮದ ರೂಪರೇಖೆಯನ್ನು ತಿಳಿಯಬಹುದೆಂದು ವಾದಿಸಿದರು. ಅವರು ವಾದ ಥಾಮ್ಸನ್ನನ ವಾದವನ್ನು ಅವಲಂಬಿಸಿದೆ. ಫೋಟಾನು ಮತ್ತು ಎಲೆಕ್ಟ್ರಾನುಗಳ ಡಿಕ್ಕಿಗಳು ಸಂಖ್ಯಾಕಲನಶಾಸ್ತ್ರದ (ಸ್ಟ್ಯಾಟಿಸ್ಟಿಕ್ಸ್) ನಿಯಮಗಳಿಗೆ ಅನುಸಾರವಾಗಿವೆ. ಕಂಪಿಸುವ ಎಲೆಕ್ಟ್ರಾನುಗಳು ಒಮ್ಮೊಮ್ಮೆ ಮುಂಜಿಗಿಯಲೂಬಹುದು. ಇದು ಅವರ ತರ್ಕಸರಣಿ. ಈ ತರ್ಕಸರಣಿ ಸರಿಯಾದರೆ ಫೋಟಾನು ಚದರಿದ ತತ್‍ಕ್ಷಣದಲ್ಲಿ ಎಲೆಕ್ಟ್ರಾನ್ ಜಿಗಿಯಬೇಕೆಂದಿಲ್ಲ. ಫೋಟಾನಿನ ಚದರಿಕೆಯ ಕೋನಕ್ಕೂ ಎಲೆಕ್ಟ್ರಾನಿನ ಜಿಗಿತದ ಕೋನಕ್ಕೂ ಒಂದು ನಿರ್ದಿಷ್ಟ ಸಂಬಂಧ ಇರಬೇಕಾದುದಿಲ್ಲ. ಈ ಎರಡು ತರ್ಕ ಸರಣಿ ಇವುಗಳಲ್ಲಿ ಯಾವುದು ಸರಿ ಎಂದು ತೀರ್ಮಾನಿಸಲು ಅನೇಕ ಪ್ರಯೋಗಗಳು ನಡೆದವು. ಬೊತೆ ಮತ್ತು ಜೀಗರ್ ಅವರು ಎರಡು ಜಿ. ಎಮ್. ಗುಣಕಗಳನ್ನು (ಕೌಂಟರ್ಸ್) ಉಪಯೋಗಿಸಿ (1925) ಹೆಚ್ಚೆಂದರೆ ಫೋಟಾನು ಚದರಿದ 10-2 ಸೆಕೆಂಡಿನ ಒಳಗೆ ಎಲೆಕ್ಟ್ರಾನು ಹಿನ್ನೆಗೆಯುತ್ತದೆಂದು ಪ್ರಾಯೋಗಿಕವಾಗಿ ತೋರಿಸಿದರು. ಈ ಪ್ರಯೋಗಗಳು ದೋಷಮುಕ್ತವಾಗಿರದಿದ್ದರೂ ಬೊರ್, ಕ್ರೇಮರ್ ಮತ್ತು ಸ್ಲೇಟರ್ ಅವರ ವಾದದಲ್ಲಿ ಹುರುಳಿಲ್ಲವೆಂಬುದನ್ನು ತೋರಿಸಲು ಸಾಕಾಗಿದ್ದುವು. 1939ರಲ್ಲಿ ಶಾಂಕ್‍ಲ್ಯಾಂಡ್ ಮಾಡಿದ ಪ್ರಯೋಗಗಳು ಫೋಟಾನಿನ ಜಿಗಿತದ ಕಾಲಕ್ಕೂ ಎಲೆಕ್ಟ್ರಾನಿನ ಹಿನ್ನೆಗೆತದ ಕಾಲಕ್ಕೂ ಇರುವ ಅಂತರವನ್ನು 10-4 ಸೆಕೆಂಡಿಗೆ ಇಳಿಸಿದುವು. ಈ ಅಂತರವನ್ನು ಬೆಲ್ ಎಂಬಾತ ಮಾಡಿದ ಪ್ರಯೋಗಗಳು (1952) 10-10 ಸೆಕೆಂಡಿಗೆ ತಂದುವು. ಕಾಂಪ್ಟನ್ನನ ಸಿದ್ದಾಂತವೇ ಪೋಟಾನಿನ ಚದರಿಕೆಯ ಕಾಲಕ್ಕೂ ಎಲೆಕ್ಟ್ರಾನಿನ ಹಿನ್ನೆಗೆತದ ಕಾಲಕ್ಕೂ ಇರುವ ಅಂತರವನ್ನು 10-19 ಸೆಕೆಂಡೆಂದು ತೋರಿಸುತ್ತದೆ. ಇಷ್ಟು ಸ್ವಲ್ಪ ಕಾಲದ ಅಂತರವನ್ನು ಅಳೆಯುವುದು ಸಾಧ್ಯವೇ ಆಗದಿರಬಹುದು.

 ಕಾಂಪ್ಟನ್ನನ ಸಿದ್ದಾಂತದ ಪರೀಕ್ಷೆ ಇನ್ನೂ ನಿಖರವಾಗಿ ನಡೆಯಬೇಕಾದರೆ ಈ ಪರಿಣಾಮವು ಚದರಿಕೆಯ ಕೋನಕ್ಕೂ ಹಿನ್ನಗೆತದ ಕೋನಕ್ಕೂ ಇರುವ ಸಂಬಂಧ ಸಮೀಕರಣವು (3) ನ್ನೇ ಅನುಸರಿಸುತ್ತದೆಂಬುದೂ ಸ್ಥಿರಪಡಬೇಕು. ಕಾಂಪ್ಟನ್ ಮತ್ತು ಸೈಮನ್ ಅವರೇ ಇದನ್ನು ಮೇಘಮಂದಿರದ ಛಾಯಾಫಲಕಗಳ ಸಹಾಯದಿಂದ ತೋರಿಸಿದರು. ಬಹುಸುಧಾರಿಸಿದ ಉಪಕರಣಗಳನ್ನು ಉಪಯೋಗಿಸಿ (1950) ಕ್ರಾಸ್ ಮತ್ತು ರ್ಯಾಮ್ಸೆ ಅವರು ಇದನ್ನು ಖಚಿತವಾಗಿ ತೋರಿಸಿದರು. 1950-52ರ ಹೊತ್ತಿಗೆ ಕಾಂಪ್ಟನ್ನನವಾದ ಸರ್ವಮಾನ್ಯತೆ ಪಡೆಯಿತು. ಕಾಂಪ್ಟನ್ ಪರಿಣಾಮ ಪೋಟಾನುಗಳ ಗುಣಗಳನ್ನು ಬಹು ನಿರ್ದಿಷ್ಟವಾಗಿ ತೋರಿಸಿ ಶಕಲಬಲಸಿದ್ಧಾಂತದ ಒಂದು ಭದ್ರವಾದ ಅಡಿಗಲ್ಲಾಯಿತು.

 ಕೀನ್ ಮತ್ತು ನಿಷಿನ ಅವರು ಕಾಂಪ್ಟನ್ ಪರಿಣಾಮದ ಆಂತರಿಕ ಸ್ವರೂಪವನ್ನು ತಿಳಿಯಲು ಡಿರ್ಯಾಕನ ಸಾಪೇಕ್ಷ ಶಕಲಬಲ ಸಿದ್ಧಾಂತವನ್ನು ಉಪಯೋಗಿಸಿದರು. ಡಿಕ್ಕಿಯ ಮೊದಲ ಘಟ್ಟದಲ್ಲಿ ಎಲೆಕ್ಟ್ರಾನು ಫೋಟಾನನ್ನು ನುಂಗಿಕೊಳ್ಳುತ್ತದೆ. ಮಧ್ಯಘಟ್ಟದಲ್ಲಿ ಅದು ಚದರಿದ ಪೋಟಾನನ್ನು ಹೊರದೂಡುತ್ತದೆ. ಆಗ ಮೂಲಫೋಟಾನನ್ನು ಹೊರಗಿಡುತ್ತದೆ. ಕೊನೆಯ ಘಟ್ಟದಲ್ಲಿ ಎಲೆಕ್ಟ್ರಾನ್ ಮೂಲಫೋಟಾನನ್ನು ನುಂಗಿ ಚದರಿದ ಫೋಟಾನನ್ನು ಹೊರದೂಡುತ್ತದೆ. ಸಾಪೇಕ್ಷ ಶಕಲಬಲಸಿದ್ಧಾಂತದ ನಿಯಮಗಳ ಪ್ರಕಾರ ಶಕ್ತಿಸಂರಕ್ಷಣಾ ನಿಯಮ ಮಧ್ಯಘಟ್ಟದಲ್ಲಿ ಪಾಲಿತವಾಗಬೇಕಾಗಿಲ್ಲ. ಈ ಘಟ್ಟದಲ್ಲಿ ಋಣಶಕ್ತಿಸ್ಥಿತಿಯು ಮಾತ್ರ ವ್ಯಕ್ತವಾಗುವುದು. ಕ್ಲೀನ್ ಮತ್ತು ನಿಷಿನ ಅವರು ಋಣಶಕ್ತಿಸ್ಥಿತಿಯನ್ನು ತಮ್ಮ ಲೆಕ್ಕಾಚಾರದಲ್ಲಿ ಅಳವಡಿಸಿಕೊಂಡು ಕಾಂಪ್ಟನ್ ಡಿಕ್ಕಿಯಲ್ಲಿ ಚದರಿದ ಫೋಟಾನುಗಳ ತೀವ್ರತೆಗೆ (ಇನ್‍ಟಿನ್ಸಿಟಿ) ಒಂದು ಸೂತ್ರವನ್ನು ಪಡೆದರು. ಈ ಸೂತ್ರ ಅನೇಕ ಪ್ರಯೋಗಗಳಿಂದ ಶ್ರುತಪಟ್ಟಿದೆ.

 ಕಾಂಪ್ಟನ್ ಪರಿಣಾಮ ಶಕಲಬಲಸಿದ್ಧಾಂತ ಮತ್ತು ಸಾಪೇಕ್ಷಶಕಲಬಲ ಸಿದ್ಧಾಂತಗಳ ಬೆಳೆವಣಿಗೆಗೆ ಸಹಾಯಕವಾದಂತೆ ಶಕಲ ವಿದ್ಯುತ್ ಬಲ ಸಿದ್ಧಾಂತ ಬಲ ಸಿದ್ಧಾಂತದ ಬೆಳೆವಣಿಗೆಗೊ ಸಹಕಾರಿಯಾಗಬಹುದೆಂದು ನಂಬಲಾಗಿದೆ. ಮೂಲಭೂತ ಕಣಗಳ ಅತಿಶಕ್ತಿಯ ಪ್ರಕ್ರಿಯೆಗಳನ್ನು ವಿವರಿಸಬೇಕಾದರೆ ಈ ಸಿದ್ಧಾಂತದಲ್ಲಿ ಮಾರ್ಪಾಡಾಗಬೇಕಾದುದು ಅಗತ್ಯವೆಂದು ಶಂಕಿಸಲಾಗಿದೆ. ಇದು ಮೂಲಕಣಗಳ ಪ್ರಕ್ರಿಯೆಯಲ್ಲಿ ಸೇರಿರುವ ಒಂದು ಮೂಲಭೂತವಾದ ಉದ್ದವನ್ನೇ ಬಳಸಿಕೊಂಡಿದೆ. ಇದು ಅಳೆಯಬಹುದಾದ ಕನಿಷ್ಠ ಉದ್ದ ಎಂದು ಊಹಿಸಲಾಗಿದೆ. ಈ ಉದ್ದ ಪ್ರಕೃತಿಯಲ್ಲಿ ಒಂದು ಮೂಲಭೂತವಾದ ಗುಣವೇ ಆಗಿದ್ದರೆ ಅದರ ಬಗ್ಗೆ ಮಾಹಿತಿ ಅತಿಶಕ್ತಿಯ ಫೋಟಾನುಗಳ ಕಾಂಪ್ಟನ್ ಡಿಕ್ಕಿಯನ್ನು ಅವಲೋಕಿಸುವಾಗ ದೊರೆಯಬಹುದು. ಆಗ ಕಾಂಪ್ಟನ್ ಪರಿಣಾಮ ವಿದ್ಯುತ್ ಶಕಲಬಲ ವಿಜ್ಞಾನಕ್ಕೂ ಅಡಿಗಲ್ಲಾಗುತ್ತದೆ.   (ಎಸ್.ಎ.ಎಚ್.)

 ಎಲೆಕ್ಟ್ರಾನ್‍ಗಳಿಂದ ಫೋಟಾನ್‍ಗಳ ಪುಟಿತ ಚದರಿಕೆ, ಅಂದರೆ ಸಂವೇಗ ಮತ್ತು ಶಕ್ತಿ ಸಂರಕ್ಷಣವಿರುವ ವಿಶೇಷ ಚದರಿಕೆಯೇ ಕಾಂಪ್ಟನ್ ಪರಿಣಾಮ. ಎಲೆಕ್ಟ್ರಾನ್‍ಗಳ ಜೊತೆ ಎಕ್ಸ್ ಅಥವಾ ಗ್ಯಾಮ-ಕಿರಣಗಳು ಸಂಘಟ್ಟಿಸಿದಾಗ ಇವುಗಳ ಅಲೆಯುದ್ಧಗಳು ಹಿಗ್ಗುತ್ತವೆ. 

 ಕಾಂಪ್ಟನ್ ಪರಿಣಾಮ ಪ್ರಕಟಗೊಂಡ ನಂತರದ ಐದೇಐದು ವರ್ಷಗಳಲ್ಲಿ, ಇಂತಹದೇ ಪರಿಣಾಮವನ್ನು ದ್ಯುತಿವಿದ್ಯುತ್ ಕಾಂತ ಬೆಳಕನ್ನು  ಬಳಸಿ, ಸಿ.ವಿ.ರಾಮನ್ ಕಂಡುಹಿಡಿದರು. ಇದು ರಾಮನ್ ಪರಿಣಾಮವೆಂದು ವಿಶ್ವವಿಖ್ಯಾತವಾಗಿದೆ. 

                                                                             

(ಪರಿಷ್ಕರಣೆ: ಹೆಚ್.ಆರ್.ಆರ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ